ದೇವದತ್ ಪಡಿಕ್ಕಲ್ (ಹುಟ್ಟು: ೭ ಜುಲೈ ೨೦೦೦) ಭಾರತದ ಕ್ರಿಕೆಟ್ ಆಟಗಾರ. ಇವರು ಕರ್ನಾಟಕ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳಲ್ಲಿ ಆಡಿದ್ದಾರೆ. ಇವರು ಭಾರತದ ೧೯ ವರ್ಷದೊಳಗಿನವರ ರಾಷ್ಟ್ರೀಯ ಕ್ರಿಕೆಟ್ ತಂಡದಲ್ಲೂ ಆಡಿದ್ದಾರೆ. == ಆರಂಭಿಕ ಜೀವನ == ಪಡಿಕ್ಕಲ್ ೭ ಜುಲೈ ೨೦೦೦ದಂದು ಕೇರಳದ ಎಟಪ್ಪಾಲ್‌ನಲ್ಲಿ ಹುಟ್ಟಿದರು. ೨೦೧೧ರಲ್ಲಿ ಇವರ ಕುಟುಂಬವು ಹೈದರಾಬಾದ್‌ನಿಂದ ಬೆಂಗಳೂರಿಗೆ ಬಂದಮೇಲೆ ಕರ್ನಾಟಕ ಇನ್ಸ್‌ಟಿಟ್ಯೂಟ್ ಆಫ್ ಕ್ರಿಕೆಟ್‌ನಲ್ಲಿ ತರಬೇತಿ ಪಡೆಯಲು ಆರಂಭಿಸಿದರು. ೨೦೧೪ರಿಂದ ೧೬ ಮತ್ತು ೧೯ ವರ್ಷದೊಳಗಿನವರ ತಂಡದಲ್ಲಿ ಕರ್ನಾಟಕದ ಪರ ಆಡಲು ಆರಂಭಿಸಿದರು. ೨೦೧೭ರ ಕರ್ನಾಟಕ ಪ್ರಿಮಿಯರ್ ಲೀಗ್‌ನಲ್ಲಿ ಬಳ್ಳಾರಿ ಟಸ್ಕರ್ಸ್ ತಂಡ ಇವರನ್ನು ಆಯ್ದುಕೊಂಡಿತು. == ವೃತ್ತಿ == ೨೦೧೮-೧೯ರ ಸಾಲಿನ ರಣಜಿ ಟ್ರೋಫಿಯಲ್ಲಿ ಕರ್ನಾಟಕದ ಪರ ೨೮ ನವೆಂಬರ್ ೨೦೧೮ರಲ್ಲಿ ಆಡುವ ಮೂಲಕ ಪ್ರಥಮ ದರ್ಜೆ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ೨೦೧೮ ಡಿಸೆಂಬರ್‌ನಲ್ಲಿ ನಡೆದ ೨೦೧೯ ಐಪಿಎಲ್ ಆಟಗಾರರ ಹರಾಜಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಡಿಕ್ಕಲ್ ಅವರನ್ನು ಖರೀದಿಸಿತು. ೨೬ ಸೆಪ್ಟೆಂಬರ್ ೨೦೧೯ರಲ್ಲಿ ಕರ್ನಾಟಕದ ಪರ ವಿಜಯ್ ಹಜಾರೆ ಟ್ರೋಫಿಯಲ್ಲಿ ಆಡುವ ಮೂಲಕ ಲಿಸ್ಟ್ ಏ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. ಹನ್ನೊಂದು ಪಂದ್ಯದಲ್ಲಿ ೬೦೯ ರನ್ ಗಳಿಸುವ ಮೂಲಕ ಪಂದ್ಯಾವಳಿಯಲ್ಲಿ ಅತಿಹೆಚ್ಚು ಗಳಿಸಿದ ಆಟಗಾರ ಎನಿಸಿಕೊಂಡರು. ಅಕ್ಟೋಬರ್ ೨೦೧೯ರಲ್ಲಿ ಇವರನ್ನು ೨೦೧೯-೨೦ ಸಾಲಿನ ದೇವಧರ್ ಟ್ರೋಫಿಯ ಇಂಡಿಯ-ಏ ಕ್ರಿಕೆಟ್ ತಂಡದಲ್ಲಿ ಹೆಸರಿಸಲಾಯಿತು. ೨೦೧೯-೨೦ ಸಾಲಿನ ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಕರ್ನಾಟಕದ ಪರ ಆಡಿ, ೮ ನವೆಂಬರ್ ೨೦೧೯ರಲ್ಲಿ ಟ್ವೆಂಟಿ೨೦ ಪಾದಾರ್ಪಣೆ ಮಾಡಿದರು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ದೇವದತ್ ಪಡಿಕ್ಕಲ್, .